ಶನಿವಾರ, ಜುಲೈ 25, 2015

ಮೋಡಹಾಗಲ (kakrol).

ಮೋಡ ಹಾಗಲು ಇದೊಂದು ಮಲೆನಾಡಿನ ತರಕಾರಿ. ಸ್ವೀಟ್ಗಾರ್ಡ್ ಅಥವಾ ಕಾಕ್ರೋಲ್ ಎಂದೂ ಇದನ್ನು ಕರೆಯುತ್ತಾರೆ. ಈ ತರಕಾರಿಯು ಈಮೊದಲು ಹತ್ತಾರು ವರ್ಷಗಳ ಹಿಂದೆ, ಜೂನ್ ನಿಂದ ಅಕ್ಟೋಬರ್ ವರೆಗೆ ಪ್ರಕೃತಿದತ್ತವಾಗಿ ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತಿತ್ತು. ಇವು ಗಡ್ಡೆಗಳಿಂದ ಬಳ್ಳಿಗಳಾಗಿ ಬೆಳೆಯುತ್ತದೆ. ಮಳೆಗಾಲ ಮುಗಿದನಂತರ ಬಳ್ಳಿ ಒಣಗಿ ಗಡ್ಡೆ ಭೂಮಿಯಲ್ಲಿ ಹಾಗೇ ಉಳಿದಿರುತ್ತದೆ. ಮತ್ತೆ ಮಳೆಗಾಲ ಬಂದಾಗ ಮತ್ತೆ ಚಿಗೊರೊಡೆದು ಬಳ್ಳಿಯಾಗಿ ಕಾಯಿ ಕೊಡುತ್ತದೆ. ಆದ್ದರಿಂದಲೇ ಇದಕ್ಕೆ ಮೋಡಹಾಗಲ ಎಂದಿರಬಹುದು. ಕಾಡುಹಂದಿ, ಮುಳ್ಳುಹಂದಿಗಳು ಬೇರಾವ ಆಹಾರ ಸಿಗದಿದ್ದಾಗ ಬೆಟ್ಟ ಗುಡ್ಡಗಳ ಭೂಮಿಯಲ್ಲಿರುವ ಗಡ್ಡೆಗಳನ್ನು ಅಗೆದು ತಿಂದು ಬಿಡುತ್ತವೆ. ಅವು ಕಾಡಿನ ಆಹಾರದಿಂದ ಬದುಕುವ ಪ್ರಾಣಿಗಳಲ್ಲವೇ? ಪಾಪ ಹೊಟ್ಟೇಪಾಡು, ಹಸಿವು. ಈ ಕಾರಣದಿಂದಾಗಿ ಈಗ ಗುಡ್ಡ ಬೆಟ್ಟಗಳಲ್ಲಿ ಮೋಡಾಗಲ ಬಳ್ಳಿ ದುರ್ಲಬವಾಗಿದೆ. ಈಗೀಗ ನಮ್ಮಲ್ಲಿ ಇವನ್ನು ನೆಟ್ಟು ಬೆಳೆಸಿಕೊಳ್ಳಬೇಕಾಗಿದೆ. ಇವನ್ನು ಬೆಳೆಸುವದು ಹೇಗೆ? ಇವುಗಳ ಹಣ್ಣುಗಳಲ್ಲಿ 30-40 ಬೇಜಗಳಿರುತ್ತವೆ. ಕೆಲವು ಬೀಜಗಳ ವ್ಯಾಪಾರಿಗಳಲ್ಲಿ ಲಭ್ಯವಿರುತ್ತದೆ. ಈ ಬೀಜವನ್ನು ಸಾವಯವ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಹಾಕಿ, ನೀರು ಹಾಕುತ್ತಿದ್ದರೆ 6-8 ದಿನಗಳಲ್ಲಿ ಮೊಳಕೆ ಒಡೆದು ಗಿಡವಾಗುತ್ತದೆ. ಇದರಲ್ಲಿ ಗಂಡು ಹೆಣ್ಣು ಎರಡು ಜಾತಿ ಇರುತ್ತದೆ. ಹೂ ಬಿಡಲು ಪ್ರಾರಂಭವಾದಾಗ ಇದು ಗೊತ್ತಾಗುತ್ತದೆ. ಗಂಡು ಜಾತಿಯದು ಹೂ ಮಾತ್ರ ಬಿಡುತ್ತದೆ. ಹೂವಿನ ಬುಡದಲ್ಲಿ ಕಾಯಿ ಇರುವದಿಲ್ಲ. ಹೆಣ್ಣು ಜಾತಿಯದರಲ್ಲಿ ಹೂವಿನ ಬುಡದಲ್ಲಿ ಮಿಡಿ ಇರುತ್ತದೆ. ಸಿಹಿ ಕುಂಬಳ ಹೂವು ಗಮನಿಸಿದ್ದೀರಲ್ಲವೇ? ಅದೇ ರೀತಿ. ಸಿಹಿ ಕುಂಬಳದಲ್ಲಿ ಎರಡು ರೀತಿಯ ಹೂವು ಒಂದೇಬಳ್ಳಿಯಲ್ಲಿ ಕಾಣಬಹುದು. ಆದರೆ ಮೋಡಹಾಗಲದಲ್ಲಿ ಹಾಗಲ್ಲ. ಒಂದು ಬಳ್ಳಿಯಲ್ಲಿ ಒಂದೇ ರೀತಿಯ ಹೂವು ಬಿಡುತ್ತದೆ. ಗಂಡು ಹೂವಿನ ಬಳ್ಳಿ ಇಲ್ಲದೆಯೂ ಕಯಿ ಪಡೆಯಬಹುದು. ಹತ್ತಾರು ಬಳ್ಳಿಗಳ ಜೊತೆಯಲ್ಲಿ, ಒಂದು ಗಂಡು ಹೂವಿನ ಬಳ್ಳಿ ಇದ್ದರೆ, ಹೇರಳವಾಗಿ ಕಾಯಿ ಪಡೆಯಬಹುದು. ಮೊದಲು ಬೆಜ ಹಾಕಿದ ವರ್ಷವೇ ಇವುಗಳಿಂದ ಕಾಯಿ ಪಡೆಯುವದು ಕಷ್ಟ. ಅತಿಯಾಗಿ ಬಳ್ಳಿ ಆರೈಕೆ ಮಾಡಿದರೆ ಕಾಯಿ ಕಾಣಬಹುದು. ಹೆಚ್ಚಿನ ಆರೈಕೆ ಅಗತ್ಯವಿಲ್ಲ. ಎರಡನೇ ವರ್ಷದಿಂದ ಕಾಯಿ ಸಿಗುತ್ತದೆ. ಬಳ್ಳಿಯನ್ನು ಚಪ್ಪರ, ಕಮಾನು ಮುಂತಾದವುಗಳಿಗೆ ಹಬ್ಬಿಸಿದರೆ, ಹೆಚ್ಚುನ ಕಾಯಿ ಪಡೆಯಬಹುದು. ವೈಜ್ಞಾನಿಕವಾಗಿ ಹೇಳುವದಾದರೆ ಇದರಲ್ಲಿ ವಿಟಮಿನ್A ಅಧಿಕ ಪ್ರಮಾಣದಲ್ಲಿ ಇರುತ್ತದೆ. ತರಕಾರಿ ಮಾರುಕಟ್ಟೆಗಳಲ್ಲಿ ಎಲ್ಲದರೂ ಗಣೇಶ ಚತುರ್ತಿ ಸಮಯದಲ್ಲಿ ದುಬಾರಿ ಬೆಲೆಗೆ ಸಿಗುತ್ತದೆ. ಅದರಲ್ಲಿ ಒಂದೆರಡು ಬಲಿತ ಕಾಯಿಗಳನ್ನು ತಂದು ಹಣ್ಣು ಮಾಡಿ ಅದರ ಬೀಜದಿಂದ ಗಿಡತಯಾರಿಸಿಕೊಳ್ಳಬಹುದು. ಬೀಜ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಬೀಜ ಬಲಿತಿದೆ ಎಂದರ್ಥ. ಯಾವುದಕ್ಕೂ ಮಾಡುವ ಆಸಕ್ತಿ ಇರಬೇಕು. ಸಾಧ್ಯವಾದರೆ ಮನೆಗಳಲ್ಲಿ ಒಂದೆರಡು ಬಳ್ಳಿ ಬೆಳೆಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ